ಕೃಷ್ಣರಾಜ ಒಡೆಯರ್ 4

1884-1940 ಮೈಸೂರು ಸಂಸ್ಥಾನದ ರಾಜ ಮನೆತನದ 24ನೆಯ ಅರಸು; ಅದಕ್ಕೆ ಮಾದರಿ ಸಂಸ್ಥಾನವೆಂಬ ಅಭಿದಾನಗಳಿಸಿ ಕೊಟ್ಟ ರಾಜನೀತಿಜ್ಞ. ಆಳ್ವಿಕೆಯ ಕಾಲ 1895-1940. ಭಾರತೀಯರ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲದಲ್ಲಿ, 1895ರಲ್ಲಿ ಇವರು ಪಟ್ಟಕ್ಕೆ ಬಂದರು. ಕೃಷ್ಣರಾಜ ಒಡೆಯರು ಆಗಿನ್ನೂ ಚಿಕ್ಕವರಾಗಿದ್ದುದರಿಂದ ಅವರ ತಾಯಿ ಕೆಂಪನಂಜಮ್ಮಣ್ಣಿಯವರು ರಾಜಪ್ರತಿನಿಧಿಯಾಗಿ ಆಡಳಿತದಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಅವರಿಗೆ ಸಹಾಯಕರಾಗಿ ದಿವಾನರೂ ಮತ್ತು ರೆಸಿಡೆಂಟರಿದ್ದರು. ಕೃಷ್ಣರಾಜರಿಗೆ ಕಾಲಾನುಗುಣವಾಗಿ ಹೊಸ ರೀತಿಯ ವಿದ್ಯೆ ಕೊಡಿಸಲಾಯಿತು. ಮೊದಲಿಗೆ ಜೆ.ಜೆ. ವಿಟ್ಲಿ, ಅನಂತರ ಸ್ಟೂವರ್ಟ್‍ಫ್ರೇಸರ್ ಇವರ ಅಧ್ಯಾಪಕರಾಗಿದ್ದರು. ಜೊತೆಗೆ ಕೃಷ್ಣರಾಜರು ರಾಜ್ಯಾದ್ಯಂತ ಪ್ರವಾಸ ಮಾಡಿ, ಅಧಿಕಾರಿಗಳನ್ನೂ ಪ್ರಜೆಗಳನ್ನೂ ಭೇಟಿ ಮಾಡಿ ಆಡಳಿತಾನುಭವ ಪಡೆದರು. ಈ ಪ್ರವಾಸ ಮತ್ತು ಭೇಟಿಗಳೇ ಕೃಷ್ಣರಾಜರ ಜನಪ್ರಿಯತೆಗೆ ಮೂಲ. ಇವರು ಉತ್ತರಭಾರತದ ಅನೇಕ ರಾಜ್ಯಗಳಲ್ಲೂ ಪ್ರವಾಸ ಮಾಡಿದರು. 1900ರಲ್ಲಿ ಕಾಠಿಯಾವಾಡದ ಉಪಶಾಖೆಗೆ ಸೇರಿದ ರಾಣಾ ಥಲಬಾಸೆ ಸಿಂಘ್‍ಜೀಯವರ ಪುತ್ರಿ ಪ್ರತಾಪ ಕುಮಾರಿಯವರನ್ನು ಮದುವೆಯಾದರು. 

	ಕೃಷ್ಣರಾಜರು ಪ್ರಾಪ್ತವಯಸ್ಕರಾದ ಮೇಲೆ (1902) ರಾಜ್ಯಾಡಳಿತವನ್ನು ಸ್ವತ: ವಹಿಸಿಕೊಂಡರು. ರಾಜ್ಯದ ಎಲ್ಲೆಡೆಯಲ್ಲೂ ಪ್ರವಾಸ ಕೈಗೊಂಡು ಜನರ ಕುಂದು ಕೊರತೆಗಳನ್ನು ವಿಚಾರಿಸಿ, ಜನತೆಯಲ್ಲಿ ಪ್ರಜಾಸರ್ಕಾರದ ಬಗೆಗೆ ಇದ್ದ ಒಲವನ್ನು ಅರಿತರು. ಸಂಸ್ಥಾನದ ಕಾನೂನು ರಚನೆಯ ಕಾರ್ಯದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಮಾಡಿದ ದೃಷ್ಟಿಯಿಂದ 1907ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಜೊತೆಗೆ ನ್ಯಾಯವಿಧಾಯಕ ಸಭೆಯನ್ನು ರಚಿಸಿದರು. ಪ್ರಜಾಪ್ರತಿನಿಧಿ ಸಭೆಗೆ ಚುನಾವಣೆಯಲ್ಲಿ ಸ್ತ್ರೀಯರಿಗೂ ಮತದಾನದ ಹಕ್ಕು ಲಭಿಸಿತು. 1923ರಲ್ಲಿ ಆಡಳಿತ ಸುಧಾರಣೆಗಳನ್ನು ಪ್ರಕಟಪಡಿಸುತ್ತ ಜನತಾ ಪ್ರತಿನಿಧಿಗಳು ಅಧಿಕಾಧಿಕ ಸಂಖ್ಯೆಯಲ್ಲಿ ರಾಜ್ಯಭಾರದಲ್ಲಿ ಭಾಗಿಗಳಾಗುವಂತೆ ಮಾಡುವಲ್ಲಿ ಭಾರತದ ಸಂಸ್ಥಾನಗಳಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯೇ ಪ್ರಾಚೀನತಮವಾದ್ದು ಎಂದು ನುಡಿದರು. 

	ಆಡಳಿತ ಸೂತ್ರವನ್ನು ವಹಿಸಿಕೊಂಡ ಕೃಷ್ಣರಾಜರು ಅನೇಕ ಜನಹಿತ ಕಾರ್ಯಗಳಲ್ಲಿ ತೊಡಗಿದರು. ಇವರ ಕಾಲದಲ್ಲಿ ಆಸ್ಪತ್ರೆಗಳು ಮತ್ತು ಸಾರಿಗೆ ಸಂಪರ್ಕಗಳಿಗೆ ಹೆಚ್ಚು ಗಮನ ಕೊಡಲಾಯಿತು. ಎಂ. ವಿಶ್ವೇಶ್ವರಯ್ಯನಂಥ ಸಮರ್ಥ ದಿವಾನರು ಇವರಿಗೆ ದೊರೆತು ಆಧುನಿಕ ಮೈಸೂರಿನ ಯೋಜನೆಗಳು ಕಾರ್ಯಗತವಾದುವು. ಇವರಿಬ್ಬರ ನೇತೃತ್ವದಲ್ಲಿ ಮೈಸೂರು ಸರ್ವತೋಮುಖ ಪ್ರಗತಿ ಹೊಂದಿತು. 

	ರಾಜ್ಯ ಮುಂದುವರಿಯಬೇಕಾದರೆ ವ್ಯವಸಾಯ ಮತ್ತು ಕೈಗಾರಿಕೆಗಳ ಬೆಳವಣಿಗೆ ಅತ್ಯಾವಶ್ಯಕವೆಂದು ಅರಿತಿದ್ದ ಕೃಷ್ಣರಾಜರು ವಿಶ್ವೇಶ್ವರಯ್ಯನವರ ಸಹಾಯದಿಂದ ಕೃಷ್ಣರಾಜಸಾಗರ, ವಾಣಿವಿಲಾಸ ಸಾಗರಗಳಂತಹ ಬೃಹತ್ ನೀರಾವರಿ ಯೋಜನೆಗಳ ಜೊತೆಗೆ ಅನೇಕ ಸಣ್ಣ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ವ್ಯವಸಾಯಾಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಮೊದಲ ಹೆಜ್ಜೆಯಾಗಿ ಶಿವಸಮುದ್ರದ ಜಲವಿದ್ಯುತ್ ಯೋಜನೆಯನ್ನೂ ಅನಂತರ ಭದ್ರಾವತಿಯ ಕಬ್ಬಿಣ ಉಕ್ಕು ಕಾರ್ಖಾನೆಯನ್ನೂ ಸ್ಥಾಪಿಸಿದರು. ಹೀಗೆ ನಾಲ್ವಡಿ ಕೃಷ್ಣರಾಜರೂ ಮೊಟ್ಟಮೊದಲ ಬಾರಿಗೆ ಇಡೀ ಸಂಸ್ಥಾನದ ಹಿತದೃಷ್ಟಿಯಿಂದ ಅನೇಕ ಕೆಲಸಗಳನ್ನು ಕೈಗೆತ್ತಿಕೊಂಡು ಸಾಧಿಸಿದರು. ಇದರಿಂದ ಸಂಸ್ಥಾನದ ಆರ್ಥಿಕ ವ್ಯವಸ್ಥೆ ಹೆಚ್ಚು ಭದ್ರವಾಯಿತು. 

	ಇವರ ಮತ್ತೊಂದು ಮಹತ್ತರ ಸಾಧನೆ ಎಂದರೆ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ (1916). ಇವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮೊದಲ ಕುಲಾಧಿಪತಿಯಾಗಿದ್ದರು. ಆ ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವ ವಿಚಾರದಲ್ಲಿ ಇವರಿಗೆ ಅಪಾರ ಆಸಕ್ತಿಯಿತ್ತು. ಮೈಸೂರು ವಿಶ್ವವಿದ್ಯಾನಿಲಯ ಆದಷ್ಟು ಬೇಗ ಕನ್ನಡದಲ್ಲಿ ಶಿಕ್ಷಣ ನೀಡಬೇಕೆಂದು ಹೇಳಿದ್ದರು. ಸರ್ವಜನಾಧರಣೀಯರಾಗಿದ್ದ ಕೃಷ್ಣರಾಜ ಒಡೆಯರು 1940ರಲ್ಲಿ ದೈವಾಧೀನರಾದರು.   								
	    (ಎಚ್.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ